ಮಾನಸ ಸರೋವರ
ಪ್ರಸಿದ್ಧ ತೀರ್ಥಸ್ಥಳ.  ಇದನ್ನು ಮಾನಸರೋವರ ಎಂದೂ ಕರೆಯುತ್ತಾರೆ. ಹಿಂದೆ ಈ ಭಾಗ ಭಾರತ ಹಾಗೂ ಟಿಬೆಟ್ ರಾಷ್ರಗಳ ಗಡಿ ಮಧ್ಯೆ ಇತ್ತು.  ಈಗ ಚೀನೀಚಿiÀುರ ಆಕ್ರಮಣದಿಂದಾಗಿ (1962) ಚೀನಾದಲ್ಲಿ ಅಂತರ್ಗತವಾಗಿದೆ.  ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಗುರ್ಲಾ ಮಾಂಧಾತ್ (2359 ಮೀ) ಹಾಗೂ ಕೈಲಾಸಪರ್ವತ (2046 ಮೀ) ಇವುಗಳ ಮಧ್ಯದಲ್ಲಿ ಈ ಸರೋವರವಿದೆ. ಇದು ದುರ್ಗಮ ಜಾಗ.  ಇಲ್ಲಿಗೆ ಹೋಗಲು ಎರಡು ಮುಖ್ಯ ದಾರಿಗಳಿವೆ.  ಇವೆರಡೂ ಹಿಮಾಲಯ ಪರ್ವತಾವಳಿಯಲ್ಲಿವೆ.  ಹಿಮಾಲಯ ಏರಿದ ಮೇಲೆ ಟಿಬೆಟ್‍ನ ಪ್ರಸ್ಥಭೂಮಿಯ ಆಚೆ ಎರಡು ಸರೋವರಗಳು ಕಾಣುತ್ತವೆ.  ಅವುಗಳ ಪೈಕಿ ಒಂದು ರಾಕ್ಷಸ ಸರೋವರ, ಇನ್ನೊಂದು ಮಾನಸ ಸರೋವರ.  ಒಂದು ಕಾಲದಲ್ಲಿ ಮಾನಸ ಸರೋವರ ನೀರು ರಾಕ್ಷಸ ಸರೋವರಕ್ಕೆ ಹರಿದುಹೋಗುತ್ತಿತ್ತಂತೆ.  ಈಗಲೂ ಆ ಜಲಧಾರೆಯ ಸ್ಥಾನ ಕಾಣುತ್ತದೆ.  ಆದರೆ ನೀರು ಹರಿದು ಬೆರೆಯುತ್ತಿಲ್ಲ.  ರಾಕ್ಷಸ ಸರೋವರ ಉದ್ದುದ್ದ ಹಬ್ಬಿದ್ದರೆ ಮಾನಸ ಅಂಡಾಕೃತಿಯಲ್ಲಿ ಪಸರಿಸಿದೆ.  ಈ ಸರೋವರದ ದಡದಲ್ಲಿ ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದೂ ಅದರಿಂದ ಈ ಸರೋವರಕ್ಕೆ ರಾಕ್ಷಸ ಸರೋವರ ಎಂಬ ಹೆಸರು ಬಂತೆಂದೂ ಐತಿಹ್ಯ.  ಸದಾಕಾಲ ಹಿಮಾಚ್ಛಾದಿತವಾಗಿರುತ್ತದೆ.  ಈ ಸರೋವರಗಳಲ್ಲಿ ಹಿಮಬಂಡೆಗಳು ಸಹ ಆಗಾಗ ತೇಲುತ್ತಿರುವುದುಂಟು.  ಮಾನಸದ ಪರಿಧಿ ಸುಮಾರು 86 ಕಿಮೀ ಉದ್ದ ಸುಮಾರು 170 ಮೀ ಆಳ.  ಈ ಸರೋವರದಲ್ಲಿ ಅನೇಕ ಬಗೆಯ ಹಂಸಪಕ್ಷಗಳು ಇವೆ.  ಮಾನಸೀ ರಾಜಹಂಸೀ ಎಂಬುದು ಲೋಕರೂಢಿ.  ಇದರ ನೀರು ನೀಲವರ್ಣವಾಗಿದ್ದು ಶುಭ್ರವಾಗಿದೆ.  ಹತ್ತಿರದಲ್ಲಿ ಬರ್ಫಾಚ್ಛಾದಿತ ಪರ್ವತಶ್ರೇಣಿಯಲ್ಲಿ ಕೆಲವು ತಪ್ತ ಕುಂಡಗಳಿವೆ.  ಇವುಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆಯೆಂಬ ಕಲ್ಪನೆ ಆಸ್ತಿಕರಲ್ಲಿದೆ.  ಮಾನಸದಲ್ಲಿ ಮಿಂದು ಕೈಲಾಸನಾಥನನ್ನು ಕಂಡರೆ ಮಹತ್ಪುಣ್ಯ ಲಭಿಸುವುದೆಂದು ಭಾವಿಸಲಾಗಿದೆ.  ಮಾನಸ ಸರೋವರದ ಜೌಗಿನಿಂದ ಸರಯೂ, ಸತ್ಲಜ್ ಮತ್ತು ಬ್ರಹ್ಮಪುತ್ರ ನದಿಗಳು ಉಗಮಗೊಂಡಿವೆ.  ಬ್ರಹ್ಮನ ಮಾನಸದಲ್ಲಿ ಈ ಸರೋವರ ಸೃಷ್ಟಿಯಾಯಿತೆಂದು ವಾಲ್ಮೀಕಿ ರಾಮಾಯಣದಲ್ಲಿ ಹೇಳಿದೆ.  ಮಹಾಭಾರತ ಕಾಲದಲ್ಲಿ ಇದು ಶ್ರೇಷ್ಠ ತೀರ್ಥವೆಂದು ಪರಿಗಣಿತವಾಗಿತ್ತು.  ವಾಮನಪುರಾಣದಲ್ಲಿ ವಿಷ್ಣು ಮತ್ಸ್ಯಾವತಾರವನ್ನು ಮಾನಸದಲ್ಲಿ ಧರಿಸಿದನೆಂದು ಹೇಳಿದೆ.

ಈ ಸರೋವರದ ಯಾತ್ರೆ ಬಹಳ ಕಷ್ಟದಾಯಕವಾದುದು.  ಇಲ್ಲಿಗೆ ಹೋಗಲು ಹಿಮಾಲಯ ಪರ್ವತಶ್ರೇಣಿಗಳಲ್ಲಿ ಅನೇಕ ಕಾಲುದಾರಿಗಳಿವೆ.  ಅವುಗಳಲ್ಲಿ ಅಲ್ಮೋರಾದಿಂದ ಹೋಗುವುದು ಹೆಚ್ಚು ಸುಲಭವಾದುದು.  ಅಲ್ಮೋರಾ ಸುಮಾರು 335 ಕಿಮೀ ದೂರವಿದೆ.  ಅಲ್ಮೊರಾ, ಗರ್ಬಿಅಂಗ್, ಲಿಪುಖಿಂಡ್ ಅನಂತರ ತಕಲಾಕೋಟ್ ಅಲ್ಲಿಂದ 52 ಕಿಮೀ ಅಂತರದಲ್ಲಿ ಮಾನಸ ಸರೋವರ.  ಈ ಪ್ರದೇಶ ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿರುವುದರಿಂದ ಗಾಳಿ ವಿರಳವಾಗಿರುತ್ತದೆ.  ಕೆಲವೊಮ್ಮೆ ಉಸಿರಾಡಲೂ ಸಾಧ್ಯವಾಗುವುದಿಲ್ಲ.  ಈ ಕಾರಣದಿಂದಾಗಿ ಇಲ್ಲಿ ಜನವಸತಿ ವಿರಳ.  ಯಾತ್ರಿಕರು ಗರ್ಬಿಆಂಗ್ ಊರಲ್ಲಿಯೇ ಮುಂದಿನ ಪ್ರಯಾಣಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಹೊಂದಿಸಿಕೊಂಡು ಹೋಗಬೇಕಾಗುತ್ತದೆ.  ಬಾಡಿಗೆಗೆ ಕುದುರೆ, ಹೇಸರಗತ್ತೆ ಹಾಗೂ ಕೂಲಿಗೆ ಆಳುಗಳು ಇಲ್ಲಿ ದೊರೆಯುತ್ತಾರೆ.  ಚೀನೀಯರ ಆಕ್ರಮಣಾನಂತರ ಇಲ್ಲಿಗೆ ಹೋಗಲು ಪಾಸ್‍ಪೋರ್ಟ್ ಪಡೆಯಬೇಕಾಗುತ್ತದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ